ನಂದಿನಿ ಮೈಸೂರು
ಮೈಸೂರಿನಲ್ಲಿ ಪಡುವಾರಹಳ್ಳಿಯ ಸ್ನೇಹ ಬಳಗದ ವತಿಯಿಂದ ರಾಷ್ಟ್ರಕವಿ ಕುವೆಂಪು ರವರ ೧೨೯ ನೇ ಜಯಂತಿಯನ್ನು ಶ್ರೀ ಮಹರ್ಷಿ ವಾಲ್ಮೀಕಿ ಪಥದಲ್ಲಿ ಆಚರಿಸಲಾಯಿತು.
ಕುವೆಂಪು ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮಾಜಿ ಮೂಡ ಹಾಗೂ ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸಿ.ಬಸವೇಗೌಡ ರವರು ಕುವೆಂಪುರವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಗ್ರಾಮದಲ್ಲಿ ಜನಿಸಿ ಮೈಸೂರಿನಲ್ಲಿ ಶಿಕ್ಷಕ ವೃತ್ತಿಯನ್ನು ಅಲಂಕರಿಸಿ ಕನ್ನಡ ಭಾಷೆಯನ್ನು ದೇಶದಲ್ಲಿಯೇ ಮೇರು ಮಟ್ಟಕ್ಕೆ ಕೊಂಡೊಯ್ದು ನಮ್ಮ ಮೈಸೂರು ವಿಶ್ವವಿದ್ಯಾನಿಲಯವನ್ನು ವಿಶ್ವ ಮಟ್ಟದಲ್ಲಿ ಪ್ರಖ್ಯಾತಗೊಳ್ಳಲು ಬಹುವಾಗಿ ಶ್ರಮಿಸಿದ ಒಬ್ಬ ಮಹಾನ್ ತಪಸ್ವಿ ಎಂದು ಬಣ್ಣಿಸಿದರು
ನಮ್ಮ ಕನ್ನಡ ಭಾಷೆಗೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಹಾನ್ ಚೇತನ ಕುವೆಂಪುರವರು ಕನ್ನಡ ನಾಡು ನುಡಿ ಮತ್ತು ಅದರ ಸಂಸ್ಕೃತಿಯ ಏಳಿಗೆಗೆ ಅವಿರತವಾಗಿ ಶ್ರಮಿಸಿ ನಮ್ಮ ನಾಡ ಭಾಷೆಯು ವಿಶ್ವ ಮಟ್ಟದಲ್ಲಿ ಪ್ರಖ್ಯಾತಗೊಳ್ಳಲು ಪ್ರಮುಖ ಕಾರಣಿಭೂತರಾದವರು ಎಂದು ತಿಳಿಸಿ, ಕುವೆಂಪುರವರ ಆದರ್ಶಗಳನ್ನು ಪ್ರತಿಯೊಬ್ಬ ಕನ್ನಡಿಗನೂ ಕೂಡ ಅವರವರ ಬದುಕಿನಲ್ಲಿ ಅಳವಡಿಸಿಕೊಂಡು ಮೌಲ್ಯಯುತವಾದ ಜೀವನವನ್ನು ನಡೆಸುವುದರೊಂದಿಗೆ ಕನ್ನಡ ಭಾಷೆಯ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡುವತ್ತ ಕೇಂದ್ರೀಕರಿಸುವಂತಾಗಲಿ ಎಂದು ಆಶಿಸಿದರು.
ಈ ದಿವಸ ನಮ್ಮ ನಾಡಿನ ಹಿರಿಯ ಚೇತನ ಕುವೆಂಪುರವರ ಜಯಂತಿಯನ್ನು ಆಚರಿಸುತ್ತಿರುವ ನಾವುಗಳು ಅವರು ನಮ್ಮ ನಾಡ ಭಾಷೆಯಾದ ಕನ್ನಡಕ್ಕೆ ಸಲ್ಲಿಸಿರುವ ಅನನ್ಯವಾದ ಮತ್ತು ಘನವಾದ ಸೇವೆಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಬೇಕು ಎಂದು ಕರೆ ನೀಡಿದರು. ನಮ್ಮ ಮೈಸೂರಿಗೆ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಮಾನಸ ಗಂಗೋತ್ರಿಯ ಆವರಣವನ್ನು ಕೊಡುಗೆಯಾಗಿ ನೀಡಿದವರಲ್ಲಿ ಕುವೆಂಪುರವರು ಅಗ್ರ ಗಣ್ಯರು ಎಂದು ಹೇಳಿದ ಅವರು ಕುವೆಂಪುರವರು ಅವರ ವಿ.ವಿ.ಮೊಹಲ್ಲಾದ ನಿವಾಸದಿಂದ ಮಾನಸ ಗಂಗೋತ್ರಿಯ ಆವರಣಕ್ಕೆ ನಡಿಗೆಯ ಮೂಲಕವೇ ಬರುತ್ತಿದ್ದಂತಹ ಸಂದರ್ಭಗಳನ್ನು ನಾನು ನನ್ನ ವಿದ್ಯಾರ್ಥಿ ದೆಸೆಯ ದಿನಗಳಿಂದಲೂ ಸಹ ಕಣ್ಣು ತುಂಬಿಕೊಂಡಿದ್ದು ಅವರ ಆ ಒಂದು ವ್ಯಕ್ತಿತ್ವವು ಒಬ್ಬ ಮಹಾನ್ ಋಷಿ ಮುನಿಗಳ ಸ್ವರೂಪದಿಂದ ಕೂಡಿತ್ತು ಎಂದು ಸ್ಮರಿಸಿಕೊಂಡರು.
ಈ ಸಂಧರ್ಭದಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ ರಾಮಕೃಷ್ಣ,ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಿ ಮಧು ವೆಂಕಟಾಚಲ,ಬಿಜೆಪಿ ಮುಖಂಡ ಈ.ಬಸವರಾಜು, ಜನಹಿತ ವಿವಿಧೋದ್ದೇಶ ಸಹಕಾರ ಸಂಘ ಉಪಾಧ್ಯಕ್ಷ ಸಿ.ಸಂತೋಷ್, ನಿರ್ದೇಶಕರಾದ ಕೃಷ್ಣಕುಮಾರ್,ರಾಘವ್ ಎಂ ಗೌಡ,,ಬಿ.ಕುಮಾರ್ ಕೇಬಲ್ ಕಿಟ್ಟಿ, ಸುರೇಂದ್ರಕುಮಾರ್, ,ಪಾಲ್ಕನ್ ಪ್ರಸನ್ನ, ಪ್ರಕಾಶ್,ನರಸಿಂಹ ರವರಿದ್ದರು.