ಆನೆ ದಾಳಿ ಅರಣ್ಯ ಸಿಬ್ಬಂದಿ ಸಾವು

ಹಾಸನ: ಗಾಯಗೊಂಡು ನರಳಾಡುತ್ತಿದ್ದ ಕಾಡಾನೆ ಭೀಮಾನನ್ನು ಸೆರೆಹಿಡಿದು ಚಿಕಿತ್ಸೆ ನೀಡಲು ಮುಂದಾದ ಅರಣ್ಯ ಸಿಬ್ಬಂದಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ್ದರಿಂದ ಅರಿವಳಿಕೆ ಶೂಟರ್ ಮೃತಪಟ್ಟ ಘಟನೆ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.

ಅರಣ್ಯ ರಕ್ಷಕ ( ಅರಿವಳಿಕೆ ಶೂಟರ್) ವೆಂಕಟೇಶ ಅವರನ್ನು ತುಳಿದು ಸಾಯಿಸಿದ್ದಾನೆ ಭೀಮ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಸಮೀಪ ನಿಂತಿದ್ದ ಭೀಮನಿಗೆ ಅರಿವಳಿಕೆ ಔಷಧಿ ಕೊಡಲು ಹತ್ತಿರ ಹೋದ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿ ದಾಳಿ ಮಾಡಿದ.

ಇದರಿಂದ ವೆಂಕಟೇಶ ತೀವ್ರ‌ ಗಾಯಗೊಂಡರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಭೀಮ ಈವರೆಗೆ ಯಾರ ಮೇಲೂ ದಾಳಿ ಮಾಡದೆ ಸೌಮ್ಯ ಸ್ವಭಾವ ಹೊಂದಿತ್ತು.

ಆದರೆ ಇತ್ತೀಚೆಗೆ ಬೇರೆ‌ ಆನೆಯೊಂದಿಗೆ ಕಾದಾಡಿ ಗಾಯಗೊಂಡಿದ್ದ.

ಹಾಗಾಗಿ ಭೀಮನಿಗೆ ಅರಿವಳಿಕೆ ಔಷಧ ಕೊಟ್ಟು ಚಿಕಿತ್ಸೆ ನೀಡಲು ಹತ್ತಿರ ಹೋದ ಅರಣ್ಯ ಸಿಬ್ಬಂದಿ ವೆಂಕಟೇಶ್‌ ಅವರನ್ನು ಅಟ್ಟಾಡಿಸಿಕೊಂಡು ಹೋಗಿ, ಸೊಂಡಿಲಿನಿಂದ ಎತ್ತಿ ಎಸೆದಿದೆ.

ಅರವಳಿಕೆ ಮದ್ದು ನೀಡಲು ವನ್ಯ ಜೀವಿ ವೈದ್ಯ ವಸೀಂ ಜತೆ ವೆಂಕಟೇಶ್‌ ತೆರಳಿದ್ದರು. ಈ ಹಿಂದೆ ಹತ್ತಾರು ಆನೆ ಸೆರೆಹಿಡಿಯುವಾಗ ಅರವಳಿಕೆ ಮದ್ದು ನೀಡಿದ್ದರು.

ಜೀರೋ ಟ್ರಾಫಿಕ್: ಆಸ್ಪತ್ರೆಗೆ ದಾಖಲು:

ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ವೆಂಕಟೇಶ್‌ ಅವರನ್ನು ಕೂಡಲೇ ಅಲ್ಲಿದ್ದ ಸಿಬ್ಬಂದಿ ಜೀರೋ ಟ್ರಾಫಿಕ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದರು.

ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್‌ ಮೃತಪಟ್ಟಿದ್ದಾರೆ.

ಜಿಲ್ಲೆಯ ಆಲೂರು ತಾಲೂಕಿನ ಹೆಮ್ಮಿಗೆ ಹೊಸಳ್ಳಿ ಗ್ರಾಮದ ವೆಂಕಟೇಶ್ (64) ಆನೆ ದಾಳಿಯಿಂದ ಮೃತಪಟ್ಟಿದ್ದು ಮೂರು ದಶಕಕ್ಕೂ ಹೆಚ್ಚು ಕಾಲ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಇತ್ತೀಚೆಗೆ ನಿವೃತ್ತಿಯಾಗಿದ್ದ ಅವರು ಅರಣ್ಯ ಇಲಾಖೆಯಲ್ಲಿ ಅರವಳಿಕೆ ಔಷಧಿ (ಗನ್ ಶೂಟ್) ಕಾರ್ಯದಲ್ಲಿ ನಿಪುಣರಾಗಿದ್ದ ಕಾರಣ ಆನೆ ಸೆರೆ ಹಿಡಿಯುವ ಎಲ್ಲಾ ಕಾರ್ಯಾಚರಣೆಯಲ್ಲಿಯೂ ಭಾಗಿಯಾಗುತ್ತಿದ್ದರು.

ಗುರುವಾರ ಬೆಳಿಗ್ಗೆ ಗಾಯದಿಂದ ನರಳುತ್ತಿದ್ದ ಭೀಮನನ್ನು ಸೇರೆ ಹಿಡಿದು ಚಿಕಿತ್ಸೆ ಕೊಡುವ ಸಲುವಾಗಿ ವೆಂಕಟೇಶ್ ಅವರು ತಂಡದೊಂದಿಗೆ ತೆರಳಿದ್ದರು.

ಸ್ವಲ್ಪ ದೂರದಿಂದಲೇ ವೆಂಕಟೇಶ್ ಗನ್ ಶೋಟ್ ಮೂಲಕ ಭೀಮನಿಗೆ ಅರವಳಿಕೆ ಔಷಧಿಯನ್ನು ನೀಡಿದ್ದರು. ಆದರೆ ತಕ್ಷಣ ದಾಳಿ ನಡೆಸಿದ ಭೀಮಾ ಪೊದೆಯೊಳಗೆ ಓಡಿಹೋದ ವೆಂಕಟೇಶ್ ಅವರನ್ನು ತುಳಿದು ತೀವ್ರವಾಗಿ ಗಾಯಗೊಳಿಸಿತು .

ನಂತರ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು ಭೀಮಾ ಸ್ವಲ್ಪ ದೂರ ಹೋದ ನಂತರ ವೆಂಕಟೇಶ್ ಅವರನ್ನು ಹೊತ್ತು ವಾಹನದ ಮೂಲಕ ಸಕಲೇಶಪುರದಿಂದ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ‌ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *