ಬಾಗಲಕೋಟೆ: ಕಾವೇರಿ ನದಿ ನೀರಿನ ಸಂಬಂಧ ದೆಹಲಿಗೆ ಶೀಘ್ರವೆ ಸರ್ವ ಪಕ್ಷ ನಿಯೋಗ ಕೊಂಡೊಯ್ಯಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿಎಂ ಮಾತನಾಡಿದರು.
ಕಾವೇರಿ ನೀರಿಗೆ ಸಂಬಂಧಿಸಿದಂತೆ ಸರ್ವ ಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರ ಸಮಯವನ್ನು ಕೋರಿದ್ದೇವೆ ಎಂದು ಹೇಳಿದರು.
ಈಗಾಗಲೇ ನಮ್ಮ ಜಲಸಂಪನ್ಮೂಲ ಸಚಿವರು ರಾಜ್ಯದ ಪರವಾಗಿ ವಾದ ಮಂಡಿಸುವ ವಕೀಲರನ್ನು ಭೇಟಿ ಮಾಡಿ ಅವರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಬುಧವಾರ ಪ್ರಕರಣ ವಿಚಾರಣೆಗೆ ಬರಲಿದ್ದು ನಮ್ಮ ವಾದ ಏನಿರಬೇಕು ಎಂದು ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಚಿವರು ಭೇಟಿಗೆ ಅವಕಾಶ ನೀಡಿದ್ದಲ್ಲಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಒತ್ತಾಯಿಸಲಾಗುವುದು.
ಮಹಾದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸಲಾಗಿದ್ದರೂ, ಅರಣ್ಯ ಹಾಗೂ ಪರಿಸರ ತೀರುವಳಿ ದೊರೆತಿರುವುದಿಲ್ಲ.ಈ ಯೋಜನೆಗೆ ತೀರುವಳಿ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ಸಿಎಂ ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ 3 ನೇ ಹಂತ ಪೂರ್ಣಗೊಳ್ಳಲು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಗಳು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 1 ಲಕ್ಷ ಕೋಟಿ ರೂ ಅಗತ್ಯವಿದೆ.
ರಾಜ್ಯಸರ್ಕಾರ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧವಿದೆ, ಕೇಂದ್ರಸರ್ಕಾರ ಶೀಘ್ರ ಅಧಿಸೂಚನೆ ಹೊರಡಿಸಬೇಕಾಗಿದೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚಿನ ಗಮನಹರಿಸಲಾಗುವುದು ಎಂದು ತಿಳಿಸಿದರು.
ಇಸ್ರೋ ವಿಜ್ಞಾನಿಗಳಿಗೆ ಸನ್ಮಾನ :
ಇಸ್ರೋ ಸಂಸ್ಥೆಯು ಆದಿತ್ಯ ಎಲ್ -1 ಉಪಗ್ರಹವನ್ನು ಯಶಸ್ಸಿಯಾಗಿ ಉಡಾವಣೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಸ್ರೋ ವಿಜ್ಞಾನಿಗಳಿಗೆ ಶುಭ ಕೋರಿದೆವು ಎಂದು ಇದೇ ವೇಳೆ ತಿಳಿಸಿದರು.
ಚಂದ್ರಯಾನ -3 ರ ಯಶಸ್ಸಿಯಾದುದಕ್ಕೆ ಇಸ್ರೋ ವಿಜ್ಞಾನಿಗಳಿಗೆ ಸರ್ಕಾರದ ವತಿಯಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗುವುದು ಎಂದರು.
ಬರಗಾಲ ಘೋಷಣೆ ಕುರಿತು ಸೆ.4 ರಂದು ತೀರ್ಮಾನಿಸಲಾಗುತ್ತದೆ ಎಂದು ಇದೇ ವೇಳೆ ಸಿಎಂ ತಿಳಿಸಿದರು.
ಒಟ್ಟಾರೆ ಈ ವರ್ಷ ಕೃಷ್ಣಾ ಮೇಲ್ದಂಡೆ ಪ್ರದೇಶದ ಅಚ್ಚುಕಟ್ಟಿನಲ್ಲಿ ಮಳೆ ಕಡಿಮೆಯಾಗಿದೆ. ಈ ವರ್ಷ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಶೇ. 56ರಷ್ಟು ಕೊರತೆಯಾಗಿದೆ.
ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ಈಗಾಗಲೇ ಮೂರು ಸಭೆಗಳನ್ನು ನಡೆಸಿದೆ. ಸೆ.04 ರಂದು ಮತ್ತೊಂದು ಸಭೆ ನಡೆಯಲಿದೆ,ಆನಂತರ ಬರಗಾಲ ಘೋಷಣೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.
ಬರ ಘೋಷಣೆಯ ನಂತರ ಕೇಂದ್ರಸರ್ಕಾರಕ್ಕೆ ಬರಪೀಡಿತ ತಾಲ್ಲೂಕುಗಳಿಗೆ ನೆರವು ಕೋರಿ ಮನವಿ ಸಲ್ಲಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಕೃಷ್ಣಾ, ಕಾವೇರಿ ಜೀವನದಿಗಳು. ಕಾವೇರಿ, ಕೃಷ್ಣಾ ನದಿ ಪಾತ್ರದಲ್ಲಿರುವವರೆಲ್ಲರೂ ನಮ್ಮ ರೈತರೇ, ತಾರತಮ್ಮ ಮಾಡುವ ಪ್ರಶ್ನೆಯೇ ಇಲ್ಲ.ಅಖಂಡ ಕರ್ನಾಟಕದಲ್ಲಿ ದಕ್ಷಿಣ, ಉತ್ತರ ಎಂಬ ಪ್ರಶ್ನೇ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟ ನುಡಿಯಲ್ಲಿ ತಿಳಿಸಿದರು.