ಬೆಂಗಳೂರು: ದೇವರು, ರಾಜ್ಯದ ಜನರು ಹಾಗೂ ತಂದೆ ತಾಯಿಯ ಆಶೀರ್ವಾದ, ವೈದ್ಯರ ಆರೈಕೆಯಿಂದ ನನಗೆ ಮೂರನೇ ಜನ್ಮ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಆರೋಗ್ಯದ ಬಗ್ಗೆ ಯಾರೂ ನಿಷ್ಕಾಳಜಿ ವಹಿಸಬಾರದು, ಏನೇ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಜನತೆಗೆ ಸಲಹೆ ನೀಡಿದರು.
ಅನಾರೋಗ್ಯದಿಂದ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು ಪೂರ್ಣ ಗುಣಮುಖರಾಗಿ ಭಾನುವಾರ ಡಿಸ್ಚಾರ್ಜ್ ಆಗಿದ್ದು,ಇದೇ ಸಂದರ್ಭದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಐದು ದಿನಗಳಿಂದ ನಾಡಿನ ಜನರು, ಅಭಿಮಾನಿಗಳು, ಹಿತೈಷಿಗಳು, ಮಾಧ್ಯಮ ಸ್ನೇಹಿತರು, ಆತಂಕದಿಂದ ಕಾಯುತ್ತಿದ್ದರು.ಮೊದಲು ಭಗವಂತನಿಗೆ, ತಂದೆತಾಯಿಗಳವರಿಗೆ ಹಾಗೂ ಆಸ್ಪತ್ರೆಯ ಎಲ್ಲಾ ವೈದ್ಯವೃಂದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ತಮ್ಮ ಆರೋಗ್ಯ ಕೈತಪ್ಪಿ ಆಸ್ಪತ್ರೆಗೆ ದಾಖಲಾದ ಸಂದರ್ಭವನ್ನು ವಿವರಿಸಿದರು ಎಚ್‌ಡಿ ಕೆ. ನಾನು ಆ ಸಂದರ್ಭದಲ್ಲಿ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದರೂ ಇವತ್ತು ಇಷ್ಟು ಸರಾಗವಾಗಿ ನಿಮ್ಮ ಮುಂದೆ ಮಾತಾಡಲು ಆಗುತ್ತಿರಲಿಲ್ಲ ಎಂದು ಭಾವುಕರಾಗಿ ನುಡಿದರು, ವೈದ್ಯರು ಸಹಾ ಬಹಳ ಕಾಳಜಿ ವಹಿಸಿದರು ಎಂದು ಕೃತಜ್ಞತೆಯಿಂದ ನೆನೆದರು.
ಸ್ವಲ್ಪ ತಡ ಮಾಡಿದ್ದರೂ ನಾನು ಮೂರ್ನಾಲ್ಕು ತಿಂಗಳು ಹಾಸಿಗೆ ಹಿಡಿಯಬೇಕಿತ್ತು. ಆದರೆ ವೈದ್ಯರ ಪರಿಶ್ರಮದಿಂದ ಮತ್ತೆ ಮೊದಲಿನ ಸ್ಥಿತಿಗೆ ಬಂದಿದ್ದೇನೆ. ಈಗಾಗಲೇ ಎರಡು ಸಲ ಹೃದಯ ಚಿಕಿತ್ಸೆಗೆ ಒಳಗಾದವನು ನಾನು ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.
ಇವತ್ತು ಚಂದ್ರಯಾನ, ಸೂರ್ಯಯಾನ ಮಾಡಿದ್ದೇವೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧಿಸಿದ್ದೇವೆ. ಕರ್ನಾಟಕದಲ್ಲಿ ಅತ್ಯಂತ ನುರಿತ, ಪ್ರತಿಭಾವಂತ, ಶ್ರೇಷ್ಠ ವೈದ್ಯರು ಇದ್ದಾರೆ. ಎಲ್ಲರೂ ಜಾಗೃತರಾಗಿ ಇರಬೇಕು ಎಂಬುದು ನನ್ನ ಮನವಿ ಎಂದು ಕುಮಾರಸ್ವಾಮಿ ಪದೇ,ಪದೇ ಕೋರಿದರು.
ಈ ವೇಳೆ ಕುಮಾರಸ್ವಾಮಿ ಅವರಿಗೆ ಚಿಕಿತ್ಸೆ ನೀಡಿದ ಡಾ.ಚಿನ್ಮಯ ನಾಗೇಶ್, ಡಾ. ಅನಿರುಧ್ ವಿಲಾಸ್ ಕುಲಕರ್ಣಿ, ಡಾ.ರೇಶ್ಮಿ ದೇವರಾಜ್, ಡಾ.ಅಭಿಜಿತ್ ವಿಲಾಸ್ ಕುಲಕರ್ಣಿ ಹಾಗೂ ಶಾಸಕ ಬಿ.ಎನ್. ರವಿಕುಮಾರ್, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಮತ್ತಿತರರು ಹಾಜರಿದ್ದರು.